ಭಾಜಪಾ ರಾಜ್ಯಾಧ್ಯಕ್ಷರ ಬದಲಾವಣೆ ಎಂದು ಪಕ್ಷದಲ್ಲಿ ಹುಳಿಹಿಂಡುವ ವಿಪಕ್ಷಗಳ ಷಡ್ಯಂತ್ರ..!

ಬಹಳ ಸಮತೋಲಿತ ಸಚಿವ ಸಂಪುಟದ ರಚನೆ ಆಗಿದೆ. ಯುವಶಕ್ತಿಗಳನ್ನು ಒಳಗೊಂಡ, ಸಂಘದ ತತ್ವಗಳನ್ನು ಅಳವಡಿಸಿಕೊಂಡ, ಪಕ್ಷನಿಷ್ಠರನ್ನು ಸೇರಿಸಿಕೊಂಡು ಮತ್ತು ಅಭಿವೃದ್ಧಿಯ ತುಡಿತವನ್ನು ಇಟ್ಟುಕೊಂಡಿರುವ ಸಚಿವರು ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟದಲ್ಲಿ ಇದ್ದಾರೆ. ಇಂತಹ ತಂಡವನ್ನು ಕಟ್ಟುವಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರ ದೂರಚಿಂತನೆ, ರಾಜಕೀಯಪಟುತ್ವ ಹಾಗೂ ಸಮಷ್ಟಿ ಹಿತದ ನಿರ್ಧಾರವೂ ಅಡಗಿದೆ. ಅದಕ್ಕಾಗಿ ಇದರ ಶ್ರೇಯ ಅವರಿಗೆ ದಕ್ಕಲಿದೆ. ಇನ್ನು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಚಿಂತನೆ ಮತ್ತು ಅವರ ಧ್ಯೇಯವನ್ನು ಒಳಗೊಂಡು ಈ ತಂಡ ರಾಜ್ಯದ ಹಿತಕ್ಕಾಗಿ ಶ್ರಮಿಸಲಿದೆ ಎನ್ನುವುದು ಸ್ಪಷ್ಟ. ಪಕ್ಷದ ವಿರುದ್ಧ ಮಾತನಾಡುವವರ, ನಾಯಕತ್ವದ ವಿರುದ್ಧ ಅಪಸ್ವರ ತೆಗೆಯುವವರನ್ನು ಮತ್ತು ವ್ಯಕ್ತಿಪೂಜೆಗಿಂತ ರಾಷ್ಟ್ರಪೂಜೆ ಮಾಡುವವರೇ ಶ್ರೇಷ್ಟ ಎನ್ನುವ ಮಾನದಂಡದ ಅಡಿಯಲ್ಲಿ ಕೆಲವರು ಶಾಸಕರಾಗಿಯೇ ಉಳಿದಿರುವುದು ಪಕ್ಷದ ರಾಷ್ಟ್ರೀಯ ನಾಯಕತ್ವ ಬಲಿಷ್ಟವಾಗಿಯೇ ಇದೆ ಎನ್ನುವುದರ ದ್ಯೋತಕ.

ಈ ಹಂತದಲ್ಲಿ ಇನ್ನು ಉಳಿದಿರುವ ಅವಧಿ ಪಕ್ಷದ ಹಿತಾಸಕ್ತಿಯಿಂದಲೂ ಬಹಳ ಪ್ರಮುಖವಾದ ಕಾಲಘಟ್ಟ. ಈ ಹಂತದಲ್ಲಿ ಯಡ್ಯೂರಪ್ಪನವರ ಮಾರ್ಗದರ್ಶನ ಮತ್ತು ಕಾಲಿಗೆ ಚಕ್ರ ಕಟ್ಟಿ ರಾಜ್ಯಾವ್ಯಾಪಿ ತಿರುಗುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ಭರಿಸುತ್ತಾ, ಮುಖಂಡರೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಾ ಕೆಲಸ ಮಾಡುತ್ತಿರುವ ನಳಿನ್ ಕುಮಾರ್ ಕಟೀಲ್ ಅವರ ಶ್ರಮ ಎರಡೂ ಸೇರಿ ಪಕ್ಷ ಚುನಾವಣೆಗಾಗಿ ಸಿದ್ಧಗೊಳ್ಳಬೇಕಾದ ಕೊನೆಯ ಅವಧಿಯಿದು. ಈ ಹಂತದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಕೈ ಬಲಗೊಳ್ಳಬೇಕಾದರೆ ಅದಕ್ಕೆ ಎಲ್ಲ ಹಿರಿಯ-ಕಿರಿಯ ಮುಖಂಡರ ಸಹಕಾರ ಅಗತ್ಯ. ಆದರೆ ಇಲ್ಲಿ ವಿಪಕ್ಷಗಳು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜನರ ಮನಸ್ಸಿನಲ್ಲಿ ಭಾವನೆ ಮೂಡಿಸಲು ಹೆಣಗುತ್ತಿರುವುದು ಕಂಡುಬರುತ್ತಿದೆ. ಅದಕ್ಕಾಗಿ ಅವರು ಹೆಣೆದಿರುವ ಬಲೆ ಏನೆಂದರೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಎನ್ನುವ ಗಾಳಿಸುದ್ದಿಯನ್ನು ಹರಡಿಸುತ್ತಿರುವುದು. ಸದ್ಯ ಈ ಬಗ್ಗೆ ಭಾಜಪಾ ರಾಷ್ಟ್ರೀಯ ನಾಯಕರಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ. ಅವರು ಕರ್ನಾಟಕದ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಚಿಂತನೆ ಮಾಡಿಲ್ಲ.

ಇಲ್ಲಿ ಜಾತಿಯನ್ನು ತಂದು ಜಾತಿಜಾತಿಗಳ ನಡುವೆ ಕಂದಕ ಮೂಡಿಸುವ ವಿರೋಧಿಗಳ ಷಡ್ಯಂತ್ರ ಫಲಿಸಲು ಸಾಧ್ಯವಿಲ್ಲ. ಪಕ್ಷದ ಎಲ್ಲಾ ಮುಖಂಡರು ಪಕ್ಷಕ್ಕಾಗಿ ಮುಂದಿನ ದಿನಗಳಲ್ಲಿ ಒಗ್ಗಟ್ಟಿನಲ್ಲಿ ಸೇವೆ ಸಲ್ಲಿಸಿ ಅಧಿಕಾರಕ್ಕೆ ತರಲು ಅದಕ್ಕಾಗಿ ಹೋರಾಡಲು ತಯಾರಾಗಿದ್ದಾರೆ. ಈ ಹಂತದಲ್ಲಿ ಆ ಜಾತಿಯ ಮುಖಂಡ, ಈ ಜಾತಿಯ ನಾಯಕ ರಾಜ್ಯಾಧ್ಯಕ್ಷರಾಗುತ್ತಾರೆ, ಈ ಜಾತಿಗೆ ಪ್ರಾತಿನಿಧ್ಯ, ಆ ಜಾತಿಗೆ ನಾಯಕತ್ವ ಎಂದು ಬಿಂಬಿಸುತ್ತಾ ಕಾರ್ಯಕರ್ತರ ನಡುವೆ ಹುಳಿ ಹಿಂಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಸೊಪ್ಪು ಹಾಕದೇ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವಲ್ಲಿ ನಿರತರಾಗಿದ್ದು, ಅವರಿಗೆ ಸಹಕರಿಸಿದ್ದಲ್ಲಿ ಪಕ್ಷ ಅಧಿಕಾರದಲ್ಲಿ ಮುಂದುವರೆಯಲಿದೆ ಮತ್ತು ತಮ್ಮ ವಿಫಲ ಪ್ರಯತ್ನಕ್ಕೆ ವಿಪಕ್ಷಗಳು ಕೈಕೈ ಹಿಸುಕಿಕೊಳ್ಳುವ ದಿನ ಬರಲಿದೆ.

Be the first to comment