ಕಿಟ್, ಆಕ್ಸಿಜನ್, ಲಸಿಕೆ, ಆರ್ಥಿಕ ಸಹಾಯ – ಅಸಹಾಯಕರ ಸಹಾಯಕ್ಕೆ ಧಾವಿಸಿದ ಖುಷಿ ಇದೆ!

ಭಾಗ 3

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಲೆ, ಸಂಸ್ಕೃತಿ, ಸಾಮಾಜಿಕ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸುವಂತಹ ಕಾರ್ಯ ಮಾಡುತ್ತಿರುವ ಯೂತ್ ಆಫ್ ಜಿಎಸ್ ಬಿ ಮಂಗಳೂರಿನ ಕೊಂಚಾಡಿಯಲ್ಲಿರುವ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಜೂನ್ 7 ರಂದು ಹಮ್ಮಿಕೊಂಡಿತ್ತು. 684 ನಾಗರಿಕರು ಆಗಮಿಸಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು. ಬಿಪಿಎಲ್ ಕಾರ್ಡ್ ನವರಿಗೆ ಉಚಿತವಾಗಿ ಲಸಿಕೆ ನೀಡಲಾಗಿದ್ದು, ಹೈದ್ರಾಬಾದಿನ ಫುಜ್ಲಾನಾ ಸಂಸ್ಥೆ ಅದರ ಪ್ರಾಯೋಜಕತ್ವವನ್ನು ಮಾಡಿತ್ತು. ಶಿಬಿರಕ್ಕೆ ಆಗಮಿಸಿದ ಎಲ್ಲರಿಗೂ ಬೆಳಿಗ್ಗೆ ತಿಂಡಿ, ಚಾ,ಕಾಫಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯೂತ್ ಆಫ್ ಜಿಎಸ್ ಬಿ ವತಿಯಿಂದ ಮಾಡಲಾಗಿತ್ತು. ಮೆಡಿಕಲ್ ಎಮರ್ಜೆನ್ಸಿ ಕೊಠಡಿ ಮತ್ತು ಎರಡು ವ್ಯಾಕ್ಸಿನೇಶನ್ ಬೂತ್ ಗಳ ಮೂಲಕ ಕೆಎಂಸಿ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಲಸಿಕೆ ಕಾರ್ಯಕ್ರಮ ಕೂಡ ಯಶಸ್ವಿಯಾಗಿ ನಡೆಯಿತು. ಬಿಪಿಎಲ್ ಕಾರ್ಡಿನವರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ವಾಹನದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಈ ದಿನಗಳಲ್ಲಿ ನೀವು ಆಕ್ಸಿಜನ್ ಕಾನ್ಸೆಟ್ರೇಟರ್ ಎಂಬ ಯಂತ್ರವನ್ನು ಕೇಳಿರಬಹುದು. ಅದರ ಅಗತ್ಯ ಇರುವವರಿಗೂ ಅದನ್ನು ಪೂರೈಸುವ ಕಾರ್ಯವನ್ನು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾಡಿದ್ದು ಒಟ್ಟು 15 ಇಂತಹ ಯಂತ್ರಗಳು ಸೇವೆಯಲ್ಲಿ ಬಳಕೆಯಾಗುತ್ತಿವೆ.

ಲಾಕ್ ಡೌನ್ ಸಂದಿಗ್ಧ ಸಮಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನೊಂದಿಗೆ ಕೈ ಜೋಡಿಸಿದವರು ಬೆಂಗಳೂರಿನ ಆಶ್ರಯಹಸ್ತ ಟ್ರಸ್ಟ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಸುಮಾರು 3000 ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಆಹಾರ ವಸ್ತುಗಳು, ದಿನನಿತ್ಯದ ಬಳಕೆಯ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಅನ್ನು ನೀಡುವ ಯೋಜನೆಯನ್ನು ಆಶ್ರಯಹಸ್ತ ಟ್ರಸ್ಟ್ ಹಾಕಿಕೊಂಡಿದ್ದು ಅದನ್ನು ಜಿಲ್ಲೆಯ ವಿವಿಧ ಭಾಗಗಳಿಗೆ ಖುದ್ದಾಗಿ ತೆರಳಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸೇವಾಂಜಲಿ ಕಾರ್ಯಕರ್ತರು ಮಾಡಿದ್ದಾರೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ಸುಮಾರು 125 ಮಂಗಳಮುಖಿಯರಿಗೂ ಈ ಕಿಟ್ ನೀಡಲಾಗಿದ್ದು ಆಶ್ರಯಹಸ್ತ ಟ್ರಸ್ಟ್ ಮುಖ್ಯಸ್ಥರೂ, ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕರೂ ಆಗಿರುವ ದಿನೇಶ್ ಅವರ ಮಾನವೀಯ ಸಹಾಯ ಮತ್ತು ಫಲಾನುಭವಿಗಳ ನಡುವೆ ಸೇತುವೆಯಾಗಿ ಸೇವಾಂಜಲಿ ಸೇವೆ ಸಲ್ಲಿಸಿದೆ.

ಇನ್ನು ಲಾಕ್ ಡೌನ್ ಆರಂಭದಲ್ಲಿ ಎರಡು ವಾರಗಳ ತನಕ ತಲಾ ಒಂದು ಸಾವಿರ ರೂಪಾಯಿ ಪ್ರಕಾರ 2000 ಕ್ಕೂ ಹೆಚ್ಚು ಜನರಿಗೆ ಆರ್ಥಿಕ ಸಹಾಯವನ್ನು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾಡಿದೆ. ಈ ಎಲ್ಲಾ ಸೇವೆ ಜನರಿಗೆ ತಲುಪಲು ಕೋಟ್ಯಾಂತರ ರೂಪಾಯಿ ಆರ್ಥಿಕ ಸಂಪನ್ಮೂಲ ಅಗತ್ಯ ಇದ್ದು, ಇದು ಒಬ್ಬಿಬ್ಬರಿಂದ ಆಗುವ ಕೆಲಸ ಅಲ್ಲವೇ ಅಲ್ಲ. ಈ ಸತ್ಕಾರ್ಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಮೇಲೆ ವಿಶ್ವಾಸ ಇಟ್ಟು, ಅದರ ಅಧ್ಯಕ್ಷರಾಗಿರುವ ಶಾಸಕ ವೇದವ್ಯಾಸ ಕಾಮತ್ ಹಾಗೂ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈಯವರ ಮೇಲೆ ಭರವಸೆ ಇಟ್ಟು ಅನೇಕರು ಸಾಕಷ್ಟು ರೀತಿಯಲ್ಲಿ ಧನಸಹಾಯ ಮತ್ತು ಬೇರೆ ರೂಪದ ನೆರವನ್ನು ಉದಾರವಾಗಿ ಮಾಡಿದ್ದಾರೆ. ಅವರೆಲ್ಲರನ್ನು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಫಲಾನುಭವಿಗಳ ಪರವಾಗಿ ಅಭಾರಿಯಾಗಿರುತ್ತದೆ

Be the first to comment