ಐಸೋಲೇಶನ್ನಲ್ಲಿ ಊಟ,ಉಚಿತ ಅಂಬ್ಯುಲೆನ್ಸ್, ಶವದಹನಕ್ಕೆ ಇನ್ಯೂರೆನ್ಸ್; ಸಹಾಯ ಒಂದಾ, ಎರಡಾ?

ಭಾಗ 2

ಇನ್ನು ಈ ಸಮಯದಲ್ಲಿ ಇನ್ನೊಂದು ವರ್ಗ ಇದೆ. ಅವರ ಕುಟುಂಬದವರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುತ್ತಾರೆ. ರೋಗಿಯನ್ನು ನೋಡಿಕೊಳ್ಳಲು ಯಾರಾದರೂ ಇರಬೇಕಾಗುತ್ತದೆ. ಅಂತವರಿಗೂ ಎರಡು ಹೊತ್ತು ಊಟದ ವ್ಯವಸ್ಥೆಯನ್ನು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾಡುತ್ತಾ ಬಂದಿದೆ. ಮಂಗಳೂರಿನ ವೆನಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗೆ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ತಲಾ 250 ರಿಂದ 300 ಊಟವನ್ನು ನಿತ್ಯ ನೀಡಲಾಗುತ್ತಿದೆ. ಅದನ್ನು ಮೇ 8 ನೇ ತಾರೀಕಿನಿಂದಲೇ ನಿತ್ಯ ನೀಡುತ್ತಾ ಬರಲಾಗುತ್ತಿದೆ. ಇನ್ನು ಕೊರೊನಾದ ಎರಡನೇ ಅಲೆ ಹೇಗಿದೆ ಎಂದರೆ ಮನೆಯ ಸದಸ್ಯರಲ್ಲಿ ಒಬ್ಬರಿಗೆ ಬಂದರೆ ಅದು ಶೀಘ್ರದಲ್ಲಿ ಮನೆಯ ಸದಸ್ಯರಿಗೆ ಹಬ್ಬುತ್ತದೆ. ಅವರಲ್ಲಿ ರೋಗದ ಲಕ್ಷಣ ಇಲ್ಲದೆ ಇರುವಂತವರು ಮನೆಯಲ್ಲಿ ಇಸೋಲೇಶನ್ ಗೆ ಒಳಗಾಗಿರಬಹುದು. ಇಂತಹ ಸಮಯದಲ್ಲಿ ಮನೆಯಲ್ಲಿ ಆಹಾರ ತಯಾರಿಸಲು ಸಾಧ್ಯವಾಗದೇ ಇದ್ದ ಸೋಂಕಿತರ ಕಷ್ಟವನ್ನು ಅರಿತ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಹಾಗೂ ಯುವಾಬ್ರಿಗೇಡ್ ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಸುಮಾರು 100 ರಿಂದ 120 ಜನರಿಗೆ ಹೈಜೆನಿಕ್ ಊಟದ ಪೂರೈಕೆ ಮಾಡುತ್ತಾ ಬರುತ್ತಿದೆ. ಇನ್ನು ಮಂಗಳೂರು ನಗರದ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಎಕ್ಕೂರು, ಜೆಪ್ಪು, ಬಂದರ್, ಶಕ್ತಿನಗರ, ಪಡೀಲ್, ಬಿಜೈ ಮತ್ತು ಬೆಂಗ್ರೆಯಲ್ಲಿ ಲಸಿಕೆಯ ದಿನಗಳಲ್ಲಿ ಬೆಳಿಗ್ಗೆ ಸುಮಾರು 215 ತಿಂಡಿ, ಕಾಫಿ ಮತ್ತು ಮಧ್ಯಾಹ್ನ 225 ಜನರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ.

ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಮಂಗಳೂರಿನ ರಥಬೀದಿಯಲ್ಲಿರುವ ಕಾಮತ್ ಕೇಟರರ್ಸ್ ಅಡುಗೆ ತಯಾರಿಕಾ ಕೇಂದ್ರದಿಂದ ಮೂರು ವಾಹನಗಳಲ್ಲಿ ಕಾರ್ಯಕರ್ತರು ಹೊರಟು ತಮ್ಮ ದಿನನಿತ್ಯದ ಬಹುಪಾಲು ಸಮಯವನ್ನು ನಿಸ್ವಾರ್ಥವಾಗಿ ಈ ಸಮಾಜಮುಖಿ ಸೇವೆಯಲ್ಲಿ ವಿನಿಯೋಗಿಸುತ್ತಿದ್ದಾರೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಊಟ, ತಿಂಡಿ ನೀಡುತ್ತಾ ನಿರಾಶ್ರಿತರ ಹೊಟ್ಟೆ ತುಂಬಿಸುತ್ತಿರುವುದು ಮಾತ್ರವಲ್ಲ, ಜೀವನ್ಮರಣ ಸ್ಥಿತಿಯಲ್ಲಿ ಅಥವಾ ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವ ಪರಿಸ್ಥಿತಿ ಬಂದಲ್ಲಿ ಅನಿವಾರ್ಯವಾಗಿ ಬೇಕಾಗಿರುವ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಿದೆ. ಒಂದು ಎಸ್ ಡಿಸಿಸಿ ಬ್ಯಾಂಕಿನ ಸಹಯೋಗದಲ್ಲಿ ಮೇ 13 ರಿಂದ ಉಚಿತ ಅಂಬ್ಯುಲೆನ್ಸ್ ಸೇವೆ ನಾಗರಿಕರಿಗೆ ಲಭ್ಯವಾಗುತ್ತಿದ್ದರೆ ಮತ್ತೊಂದು ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಜೂನ್ 10 ರಿಂದ ಸೇವೆಯಲ್ಲಿದ್ದು ಒಟ್ಟು ಎರಡು ಅಂಬ್ಯುಲೆನ್ಸ್ ಗಳು ಉಚಿತವಾಗಿ ಜನಸೇವೆಯಲ್ಲಿ ಬಳಕೆಯಾಗುತ್ತಿದೆ. ಈ ಅಂಬ್ಯುಲೆನ್ಸ್ ಗಳ ಸಂಪೂರ್ಣ ನಿರ್ವಹಣೆಯನ್ನು ಟ್ರಸ್ಟ್ ಮಾಡುತ್ತಿದ್ದು ಅನೇಕ ಕುಟುಂಬಗಳು ಇದರ ಪ್ರಯೋಜನವನ್ನು ಪಡೆದಿವೆ. ಕೊರೊನಾ ಸಂಪೂರ್ಣ ಇಳಿಮುಖವಾಗುವ ತನಕವೂ ಈ ಸೇವೆ ಲಭ್ಯವಿರಲಿದೆ.

 ಕೊರೊನಾ ಸೋಂಕಿನಿಂದ ಯಾರಾದರೂ ಮೃತರಾದಾಗ ಅವರ ಕುಟುಂಬದವರೇ ಸ್ಮಶಾನಕ್ಕೆ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಹಿಂದೆ ಮುಂದೆ ನೋಡಿದ ಅನೇಕ ಉದಾಹರಣೆಗಳು ಇವೆ. ಇನ್ನು ಕೆಲವೊಮ್ಮೆ ಮನೆಯ ಪ್ರಮುಖ ಸದಸ್ಯರು ಕೋವಿಡ್ ಸೋಂಕಿತರಾಗಿದ್ದಲ್ಲಿ ಆಗ ಅವರಿಗೆ ತಮ್ಮ ಕುಟುಂಬದವರದ್ದೇ ಅಂತಿಮ ಸಂಸ್ಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಮ್ಮೆ ಸಂಬಂಧಿಕರು ಬೇರೆ ಊರಿನಿಂದ ಬರಲು ಸಾಧ್ಯವಾಗದೇ, ಮೃತರು ಬೇರೆ ಊರಿನವರಾದರೆ ಇಲ್ಲಿ ಯಾರೂ ಇಲ್ಲದಿದ್ದ ಪಕ್ಷದಲ್ಲಿ ಅಂತವರಿಗೂ ಯೋಗ್ಯ ವಿಧಿವತ್ತಾದ ಅಂತಿಮ ಪ್ರಯಾಣಕ್ಕೆ ಸಿದ್ಧತೆ ನಡೆಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಅರಿತಿದ್ದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಜರಂಗದಳದ ಯುವಕರು ಅಂತಹ ಶವಗಳನ್ನು ಸ್ಮಶಾನಕ್ಕೆ ತಂದು ಅಲ್ಲಿ ಪುರೋಹಿತರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ, ಮಂತ್ರಪಠಣ ನಡೆಸಿ ನಂತರ ಶವಸಂಸ್ಕಾರ ಮಾಡುತ್ತಿದ್ದರು. ಕಳೆದ ವರ್ಷ ಕೊರೊನಾ ಸೋಂಕಿತರು ಮರಣ ಹೊಂದಿದಾಗ ಅವರ ಶವಗಳನ್ನು ಸುಡುವ ಕುರಿತು ಎದ್ದಿದ್ದ ವಿವಾದಗಳ ಬಗ್ಗೆ ನಮಗೆಲ್ಲ ಗೊತ್ತೆ ಇದೆ. ಈ ವರ್ಷ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದ್ದು ಅಂತಹ ವಿರೋಧ ವ್ಯಕ್ತಪಡಿಸುವ ಘಟನೆ ನಡೆದಿಲ್ಲವಾದರೂ ಸತ್ತವರ ಮನೆಯಿಂದ ಶವಸಂಸ್ಕಾರಕ್ಕೆ ಯಾರೂ ಇಲ್ಲದೆ ಇದ್ದಾಗ ನಾವಿದ್ದೇವೆ ಎಂದು ಬಜರಂಗದಳ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಹೀಗೆ ಸೇವೆಯಲ್ಲಿ ನಿರತರಾಗಿರುವವರಿಗೆ ಸುರಕ್ಷೆ ಕೂಡ ಮುಖ್ಯ ಎಂದು ಅರಿತ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಅವರಿಗೆ ಬೇಕಾದ ಪಿಪಿಇ ಕಿಟ್ ನಿಂದ ಹಿಡಿದು ಪ್ರತಿಯೊಂದು ಅಗತ್ಯ ವಸ್ತುಗಳನ್ನು ನೀಡಿರುವುದು ಮಾತ್ರವಲ್ಲ ಈ ಕಾರ್ಯದಲ್ಲಿ ತನು, ಮನದಿಂದ ಸೇವೆ ಸಲ್ಲಿಸುತ್ತಿದ್ದ 25 ಬಜರಂಗದಳದ ಕಾರ್ಯಕರ್ತರಿಗೆ ಹಾಗೂ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರಿಗೆ ತಲಾ 5 ಲಕ್ಷ ರೂಪಾಯಿಗಳ ಕೊರೊನಾ ಕವಚ್ ಇನ್ಸೂರೆನ್ಸ್ ಜೀವವಿಮೆಯನ್ನು ಮಾಡಿದೆ. ಇಷ್ಟೇ ಅಲ್ಲದೆ ಸ್ಮಶಾನದಲ್ಲಿ ಕೆಲಸ ಮಾಡುವವರ ಜೀವವೂ ಅಷ್ಟೇ ಅಮೂಲ್ಯ ಎಂದು ಅರಿತ ಟ್ರಸ್ಟ್ ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಒಟ್ಟು 17 ಜನರಿಗೆ ತಲಾ 2 ಲಕ್ಷ ರೂಪಾಯಿಯ ಜೀವವಿಮೆಯನ್ನು ಮಾಡಿಸಿದೆ. ಇಂತಹ ಸಮಯದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುವವರ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವಾದರೂ ನಾವು ನಮ್ಮ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡಬೇಕು ಎನ್ನುವುದು ಟ್ರಸ್ಟ್ ನ ಆಶಯ.
ಕೊರೊನಾ ಅವಧಿಯಲ್ಲಿ ನಾವು ಎದುರಿಸುತ್ತಿರುವ ಬಹಳ ಮುಖ್ಯ ಸವಾಲು ಏನೆಂದರೆ ರಕ್ತದ ಕೊರತೆ ಬರುವ ಸಾಧ್ಯತೆ. ಈಗ 18 ರಿಂದ 44 ವರ್ಷದ ಒಳಗಿನ ಜನರಿಗೂ ಸರಕಾರ ಕೊವಿಡ್ ಲಸಿಕೆಯನ್ನು ನೀಡುತ್ತಿದೆ. ಈ ವಯೋಮಾನದವರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ. ಲಸಿಕೆ ತೆಗೆದುಕೊಂಡ ವ್ಯಕ್ತಿ 45 ದಿನ ರಕ್ತದಾನ ಮಾಡುವಂತಿಲ್ಲ ಎಂದು ವೈದ್ಯರು ಹೇಳುವುದರಿಂದ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ರಕ್ತದ ಅಗತ್ಯ ಕಂಡುಬಂದಲ್ಲಿ ಅದು ಸಿಗದೆ ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಇದನ್ನು ಮನಗಂಡು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾಜಪಾ ದಕ್ಷಿಣ ಮಂಡಲ ಮತ್ತು ಬಿರುವೆರ್ ಕುಡ್ಲ ಸಂಘಟನೆ ವತಿಯಿಂದ ಟಿವಿ ರಮಣ್ ಪೈ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಾವಿರಕ್ಕೂ ಮಿಕ್ಕಿ ದಾನಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು.

Be the first to comment