ಹಸಿದವರಿಗೆ ಕಾಮಧೇನು ಆದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವಿತರಿಸಿದ ಊಟ ಎಷ್ಟು ಗೊತ್ತಾ?

ಭಾಗ-1

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಈ ವಾಕ್ಯದಲ್ಲಿ ಅದೇನೋ ಸಕರಾತ್ಮಕವಾದ ಶಕ್ತಿ ಇದೆ. ಈ ವಾಕ್ಯವನ್ನು ನಾವೆಲ್ಲರೂ ಈ ಹಿಂದೆ ನೂರಾರು ಬಾರಿ ಓದಿರುತ್ತೇವೆ. ಕೇಳಿರುತ್ತೇವೆ. ಆದರೆ ಇದರ ಅನುಭವ ಸಿಗಬೇಕಾದರೆ ಅದಕ್ಕೆ ಯೋಗ ಬೇಕು. ಸಮಿಧೆ ಇಡೀ ಯಜ್ಞದ ಒಂದು ಭಾಗ. ಯಜ್ಞ ಪರಿಪೂರ್ಣವಾಗಬೇಕಾದರೆ ಸಮಿಧೆ ಬೇಕೆ ಬೇಕು. ಇವತ್ತಿನ ದಿನಗಳಲ್ಲಿ ಯಜ್ಞ ಎಂದರೆ ಕೊರೊನಾ ವಿರುದ್ಧದ ಹೋರಾಟ. ಅದರಲ್ಲಿ ಕೊರೊನಾ ವಾರಿಯರ್ಸ್ ಗಳಿಂದ ಹಿಡಿದು ಸಮಾಜಸೇವಾ ಸಂಘಟನೆಗಳು ತಮ್ಮನ್ನು ತಾವು ಸೇವಾರೂಪದಲ್ಲಿ ಸಮಿಧೆಯಂತೆ ಅರ್ಪಿಸಿಕೊಳ್ಳುತ್ತಿವೆ. ಈ ಸಮರದ ಜ್ವಾಲೆ ತುಂಬಾ ದಿನಗಳಿಂದ ಬ್ರಹ್ಮಾಂಡ ರೂಪವನ್ನು ಪಡೆದು ಹಳ್ಳಿಯಿಂದ ದಿಲ್ಲಿಯ ತನಕ ಯಾರನ್ನೂ ಬಿಟ್ಟಿಲ್ಲ. ಇಂತಹ ಕಾಲಘಟ್ಟದಲ್ಲಿ ಸೇವೆಯ ಮನಸ್ಸು ಮಾಡಲು ಗಟ್ಟಿಗುಂಡಿಗೆ ಬೇಕು. ಅಸಹಾಯಕರ ಕಣ್ಣು ಒರೆಸಲು ಧೃಡಚಿತ್ತ ಬೇಕು. ಸೇವೆಯನ್ನು ಅನುಷ್ಠಾನಕ್ಕೆ ತರಲು ಪ್ರಬಲ ಇಚ್ಚಾಶಕ್ತಿ ಬೇಕು. ಸೇವೆಯನ್ನು ಉಳಿಸಿ ಮುಂದುವರೆಸಲು ಹಟಸಾಧನೆ ಬೇಕು. ಸೇವೆಯನ್ನು ತಾರ್ಕಿಕ ಅಂತ್ಯ ಮುಟ್ಟಿಸುವ ತನಕ ಶಸ್ತ್ರವನ್ನು ಕೆಳಗೆ ಇಳಿಸುವ ಪ್ರಶ್ನೆನೆ ಇಲ್ಲ ಎಂದು ನಿರ್ಧರಿಸುವ ಒಬ್ಬ ಸೈನಿಕನ ಶೌರ್ಯ ಬೇಕು. ಇದೆಲ್ಲದರ ಜೊತೆಗೆ ಇದಕ್ಕೆ ಆರ್ಥಿಕ ಸಂಪನ್ಮೂಲ ಎಂಬ ಬೆಳಕನ್ನು ಎಲ್ಲಿಂದಲಾದರೂ ತಂದು ಅಸಹಾಯಕರ ಬೊಗಸೆಗೆ ಹಾಕಲು ತಾಯಿಹೃದಯವೂ ಬೇಕು.

ಹೀಗೆ ಸೇವೆಯೆಂಬ ಯಜ್ಞದಲ್ಲಿ ತಮ್ಮನ್ನು ತಾವು ಅರ್ಪಿಸಲು ತಯಾರಾಗಿ, ಹಸಿದ ಹೊಟ್ಟೆಗೆ ಅನ್ನ ನೀಡುವ ಅನ್ನಪೂರ್ಣೆಯರಾಗಿ, ನಾಳೆಯೂ ಸಿಗುತ್ತಾ ಎಂದು ನೊಂದವರ ಪ್ರಶ್ನೆಗೆ ಹೌದು ಎಂದು ಉತ್ತರವಾಗಿ, ಸಾಮಾಜಿಕ ಸೇವೆ ಎಂಬ ಶಬ್ದಕ್ಕೆ ಅನ್ವರ್ಥರಾಗಿ, ಸೇವೆಯನ್ನೇ ಜೀವಿಸುತ್ತಿರುವ ಸಂಘಟನೆ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್. ಹೇಗೆ ಈ ಲಾಕ್ ಡೌನ್ ಅವಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎನ್ನುವ ಪ್ರಶ್ನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮುಂದೆ ಬಂದಾಗ ಅದರ ಮುಂದೆ ಇದ್ದದ್ದು ರಸ್ತೆಬದಿಯಲ್ಲಿ ಎರಡು ಹೊತ್ತು ಊಟಕ್ಕಾಗಿ ಆ ದಿನದ ದುಡಿಮೆ ಆ ದಿನಕ್ಕೆ ದುಡಿಯುವ ಗುಳಿಬಿದ್ದ ಕಣ್ಣುಗಳ ಅಸಹಾಯಕರ ದೃಶ್ಯ. ಲಾಕ್ ಡೌನ್ ಎಂದರೆ ಎಲ್ಲವೂ ಬಂದ್. ಉದ್ಯೋಗವಿಲ್ಲ, ಆದಾಯ ಇಲ್ಲ, ಕಿಸೆಯಲ್ಲಿ ಹಣ ಮೊದಲೇ ಇಲ್ಲ. ಹೀಗೆ ಪ್ರಪಂಚವೇ ಬಂದ್ ಆದರೂ ತೆರೆದಿರುವುದು ಒಂದೇ. ಅದು ಉದರ. ಅದನ್ನು ಬಂದ್ ಮಾಡುವ ತಂತ್ರಜ್ಞಾನವನ್ನು ಮನುಷ್ಯ ಅವಿಷ್ಕರಿಸಲು ಸಾಧ್ಯವೇ ಇಲ್ಲ. ಎಲ್ಲವೂ ಬಂದ್ ಇದ್ದಾಗ ಮನೆ, ಸಂಸಾರ ಇದ್ದವರು ಎಷ್ಟೇ ಕಷ್ಟವಾದರೂ ಮನೆಯಲ್ಲಿ ಗಂಜಿ, ಚಟ್ನಿ ಮಾಡಿಯಾದರೂ ದಿನ ದೂಡಬಹುದು. ಆದರೆ ರಸ್ತೆಯೇ ಮನೆ ಆದವರಿಗೆ, ಫುಟ್ ಪಾತ್ ಗಳೇ ಮಂಚವಾದವರಿಗೆ ತುತ್ತು ಅನ್ನ ಸಿಗುವುದು ಎಲ್ಲಿಂದ. ಇಂತಹ ಪ್ರಶ್ನೆಗೆ ಉತ್ತರ ನಾವಿದ್ದೇವೆ ಎಂದು ಆರಂಭದಲ್ಲಿ ಹೊರಟವರೇ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಯುವಕರು. ಈ ಟ್ರಸ್ಟಿಗೆ ಈಗ 20ರ ಹರೆಯ, ತುಂಬು ವಯಸ್ಸು. ಅದೇ ರೀತಿಯಲ್ಲಿ ಅದರ ಅಧ್ಯಕ್ಷರೂ ಕೂಡ ಉತ್ಸಾಹಿ ತರುಣ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್. ಅವರೊಂದಿಗೆ ಹನುಮಂತ ಕಾಮತ್, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಸಹಿತ ಅನೇಕ ಸಮಾಜಪರ ಮನಸ್ಸುಗಳು ಒಟ್ಟಾಗಿ ಕಳೆದ ವರ್ಷದ ಲಾಕ್ ಡೌನ್ ಹಾಗೂ ಈ ವರ್ಷದ ಲಾಕ್ ಡೌನ್, ಜನತಾ ಕರ್ಫರ್ೂವಿನಲ್ಲಿ ಮಾಡಿರುವ ಕಾರ್ಯಗಳನ್ನು ನೋಡಿ ಮೂಕವಿಸ್ಮಿತನಾದೆ. ನೀಡುವ ಊಟದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಉತ್ತಮ ಕ್ವಾಲಿಟಿಯ ಅಕ್ಕಿಯಿಂದ ಮಾಡಿದ ಅನ್ನನಿಂದ ಹಿಡಿದು ನಿತ್ಯವೂ ಬಗೆಬಗೆಯ ಅಡುಗೆಯನ್ನು ಮಾಡಿ ಅದನ್ನು ಶಿಸ್ತುಬದ್ಧವಾಗಿ ಮಂಗಳೂರಿನ ಅನೇಕ ಭಾಗಗಳಲ್ಲಿ ಅವರು ಹಂಚುತ್ತಿರುವುದನ್ನು ನೋಡಿದಾಗ ಆ ಪರಿ ಅರ್ಪಣ ಮನೋಭಾವ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ಬಾರಿ ಎಪ್ರಿಲ್ 30 ರಿಂದಲೇ ಊಟವನ್ನು ಹಂಚುವುದಕ್ಕೆ ನಾಂದಿ ಹಾಡಿತ್ತು. ಆರಂಭದ ದಿನಗಳಲ್ಲಿ ಈ ಟ್ರಸ್ಟಿನವರು ಮಾತ್ರ ಊಟ ನೀಡುತ್ತಿದ್ದ ಕಾರಣ ಅಂದಾಜು 3000 ಜನರಿಗೆ ಮಧ್ಯಾಹ್ನದ ಊಟ ಮತ್ತು 2800 ರಿಂದ 3000 ತನಕ ರಾತ್ರಿಯ ಊಟ ವಿತರಣೆಯಾಗುತ್ತಿತ್ತು. ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವ ಮಾತೊಂದಿತ್ತು. ಆದರೆ ಇಲ್ಲಿ ದಾನಕ್ಕಿಂತ ಸೇವೆ ಮುಖ್ಯವಾಗಿದೆ. ಅದೇ ರೀತಿ ನಾವು ಮಾಡುವ ಸೇವೆ ನೋಡಿದ ಉಳ್ಳವರು ಇನ್ನಷ್ಟು ಜನರಿಗೆ ಸಹಾಯ ಮಾಡಲು ಮುಂದಾದರೆ ಅದಕ್ಕಿಂತ ಶ್ರೇಷ್ಟತೆ ಬೇರೆ ಇದೆಯಾ? ಎಲ್ಲರಿಗೂ ಒಬ್ಬರೇ ಅಥವಾ ಒಂದೇ ಸಂಘಟನೆ ಕೊಡಲು ಅಸಾಧ್ಯ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸೇವಾಕಾರ್ಯದಿಂದ ಪ್ರೇರಣೆ ಸಿಕ್ಕಿ ಅನೇಕ ಸಂಘಟನೆಗಳು, ವ್ಯಕ್ತಿಗತವಾಗಿ ಅನೇಕರು ಊಟ, ತಿಂಡಿ ಸಂತಸ್ಥರಿಗೆ ನೀಡಲು ಮುಂದೆ ಬರುತ್ತಿರುವುದರಿಂದ ನಂತರದ ದಿನಗಳಲ್ಲಿ ಮಧ್ಯಾಹ್ನ 2000 ದಿಂದ 2200 ತನಕ ಹಾಗೂ ರಾತ್ರಿ 1800 ರಿಂದ 2000 ತನಕ ಊಟ ಸಾಕಾಗುತ್ತಿದೆ. ಇದು ಕೂಡ ಒಂದು ಯಶಸ್ಸು. ಇನ್ನು ಸಂಕಷ್ಟದಲ್ಲಿರುವವರು ಕೂಡ ನಮ್ಮಂತೆಯೇ ಎನ್ನುವುದನ್ನು ಯಥಾವತ್ತಾಗಿ ಸೇವೆಯ ಭಾಗವಾಗಿ ಅಳವಡಿಸಿರುವ ಈ ಟ್ರಸ್ಟ್ ಸಂಜೆ ಕೂಡ ಸುಮಾರು 800 ರಿಂದ 900 ಜನರಿಗೆ ಸೋಡಾ ಶರಬತ್ತು, ತಂಪು ಪಾನೀಯ ಹಾಗೂ ತಿಂಡಿಯಲ್ಲಿ ವಡಾಪಾವ್ ಸಹಿತ ದಿನಕ್ಕೊಂದು ವಿವಿಧ ತಿಂಡಿಗಳು ಹಾಗೂ ರಸ್ತೆಬದಿ ವಾಸಿಸುವವರಿಗೂ ಸಿಹಿತಿಂಡಿ ತಿನ್ನುವ ಆಸೆ ಇರುತ್ತದೆ ಎನ್ನುವ ಕಾರಣಕ್ಕೆ ಮಾಲ್ಪುರಿ ಸಹಿತ ವಿಭಿನ್ನ ಬಗೆಯ ಸಿಹಿತಿಂಡಿ ಕೂಡ ನೀಡುತ್ತಾ ಬಂದಿದೆ. ಇನ್ನು ಈ ಅವಧಿಯಲ್ಲಿ ನಮ್ಮ ಆರಕ್ಷಕ ಬಂಧುಗಳಿಗೂ ಉತ್ತಮ ಆಹಾರವನ್ನು ನೀಡುವ ಉದ್ದೇಶದಿಂದ ಪೊಲೀಸ್ ಠಾಣೆಗಳಿಗೆ ಊಟ, ತಿಂಡಿಯನ್ನು ಪೂರೈಸುತ್ತಾ ಅವರಿಗೆ ನೈತಿಕ ಹುಮ್ಮಸ್ಸನ್ನು ಕೂಡ ಟ್ರಸ್ಟ್ ಕಾರ್ಯಕರ್ತರು ನೀಡುತ್ತಾ ಬಂದಿದ್ದಾರೆ.

Be the first to comment