88 ನೇ ಭಾರತೀಯ ವಾಯುಸೇನಾ ದಿನಾಚರಣೆ… ಬಾಲಕೋಟ್‌ ಏರ್‌ಸ್ಟ್ರೈಕ್‌ನಲ್ಲಿ ಭಾಗಿಯಾದ ಮೂವರು ಯೋಧರಿಗೆ “ಯುದ್ಧ್‌ ಸೇವಾ ಪದಕ” ನೀಡಿ ಗೌರವ…

ನಮ್ಮ ಹೆಮ್ಮೆಯ ವಾಯುಪಡೆ ಇಂದು ೮೮ ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಧೀರ ವಾಯುಯೋಧರಿಗೆ ನಮ್ಮ ನಮನಗಳು. 1932 ರಲ್ಲಿ ಭಾರತೀಯ ವಾಯುಪಡೆ ಆರಂಭವಾಗಿದ್ದು ಅಂದಿನಿಂದ ತನ್ನ ಶೌರ್ಯವನ್ನು ಪ್ರದರ್ಶಿಸುತ್ತಾ ಶತ್ರುರಾಷ್ಟ್ರಗಳ ಬೆವರಿಳಿಸುತ್ತಿದೆ. ವಾಯುಪಡೆಯ ದಿನಾಚರಣೆಯ ಅಂಗವಾಗಿ ಪ್ರಧಾನಿ, ರಾಷ್ಟ್ರಪತಿಗಳು ಸೇರಿದಂತೆ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದು ಅವರ ಶೌರ್ಯ ಸಾಹಸವನ್ನು ನೆನಪಿಸಿಕೊಂಡಿದ್ದಾರೆ. ಇಂದು ಬಾಲಾಕೋಟ್ ದಾಳಿಯಲ್ಲಿ ತನ್ನ ಶೌರ್ಯ ಪ್ರದರ್ಶಿಸಿದ ಮೂವರು ಧೀರ ಯೋಧರಿಗೆ ಯುದ್ಧ್‌ ಸೇವಾ ಪದಕʼ ನೀಡಿ ಗೌರವಿಸಲಾಯಿತು.

ಮೂವರು ವೀರ ಯೋಧರಿಗೆ “ಯುದ್ಧ್‌ ಸೇವಾ ಪದಕ”

ಹೌದು,  ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಕಳೆದ ವರ್ಷ ಫೆಬ್ರವರಿ 26 ರಂದು ಪಾಕಿಸ್ಥಾನದ ಬಾಲಕೋಟ್‌ನಲ್ಲಿನ  ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಬಾಲಕೋಟ ವೈಮಾನಿಕ ದಾಳಿಯಲ್ಲಿ ಭಾಗಿಯಾದ ಭಾರತೀಯ ವಾಯುಸೇನೆಯ ಮೂರು ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ‘ಯುದ್ಧ್‌ ಸೇವಾ ಪದಕʼ ನೀಡಿ ಗೌರವಿಸಲಾಗಿದೆ. ಈ ಪದಕ ಯುದ್ಧ, ಸಂಘರ್ಷ ಅಥವಾ ಯುದ್ಧದ ಸಮಯದಲ್ಲಿ ಉನ್ನತ ಕ್ರಮಾಂಕದಲ್ಲಿ ವಿಶಿಷ್ಟ ಸೇವೆಯನ್ನು ನೀಡಿರುವ ಯೋಧರ ಸಾಹಸವನ್ನು ಗುರುತಿಸುತ್ತದೆ.

ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್, ಗ್ರೂಪ್ ಕ್ಯಾಪ್ಟನ್ ಹ್ಯಾನ್ಸೆಲ್ ಸಿಕ್ವೆರಾ ಮತ್ತು ಗ್ರೂಪ್ ಕ್ಯಾಪ್ಟನ್ ಹೇಮಂತ್ ಕುಮಾರ್ ವಾದ್ರಾ‌ ಯುದ್ಧ್ ಸೇವಾ ಪದಕವನ್ನು ಪಡೆದಿದ್ದಾರೆ. ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಭಾರತೀಯ ವಾಯುಸೇನೆಯ ಮಹಿಳಾ ಫೈಟರ್ ಕಂಟ್ರೋಲರ್ ಆಗಿದ್ದು  ಭಾರತೀಯ ವಾಯುಪಡೆ ನಡೆಸಿದ  2019 ರ ಬಾಲಕೋಟ್ ವಾಯುದಾಳಿಯ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಮಾರ್ಗದರ್ಶನ ನೀಡಿದ ತಂಡದ ಭಾಗವಾಗಿದ್ದವರು.

ಒಟ್ಟಾರೆಯಾಗಿ ಭಾರತೀಯ ವಾಯುಪಡೆ ದೇಶ ರಕ್ಷಣೆ ಸದಾ ಸರ್ವಸನ್ನದ್ದವಾಗಿ ನಿಂತಿದೆ. ಎಂತಹ ಸಂದರ್ಭದಲ್ಲೂ ಶತ್ರುಗಳನ್ನು ಮಟ್ಟಹಾಕಲು ಸಿದ್ಧರಾಗಿ ನಿಂತಿದ್ದಾರೆ. ಮತ್ತೊಮ್ಮೆ ವಾಯುಯೋಧರಿಗೆ ನಮ್ಮ ನಮನಗಳು. ನಿಮ್ಮ ಶೌರ್ಯ ಸಾಹಸ ಆಗಸಕ್ಕೆತ್ತರ  ಏರಲಿ.

Be the first to comment