ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆಗೆ ಭಾರಿ ಯಶಸ್ಸು, ರಕ್ಷಣಾ ಕ್ಷೇತ್ರದ ರಫ್ತಿನಲ್ಲೂ ಭಾರತ ಮೈಲಿಗಲ್ಲು!

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ವಿದೇಶಗಳಿಗೆ ಭೇಟಿ ನೀಡಿ ಅಪಾರ ಪ್ರಮಾಣದ ವಿದೇಶಿ ಬಂಡವಾಳ ಹರಿದುಬರುವಂತೆ ಮಾಡುವ ಜತೆಗೆ ಭಾರತವನ್ನೂ ಸ್ವಾವಲಂಬಿಯನ್ನಾಗಿಸುವ ದಿಸೆಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೊಳಿಸಿದರು. ಇದರಂತೆ ಭಾರತವು ಅತಿಯಾಗಿ ಬೇರೆ ದೇಶಗಳನ್ನೇ ಅವಲಂಬಿಸದೆ, ಭಾರತದಲ್ಲೇ ಶಸ್ತ್ರಾಸ್ತ್ರ, ಯುದ್ಧನೌಕೆ, ಯುದ್ಧವಿಮಾನಗಳೂ ಸೇರಿ ಹಲವು ವಸ್ತುಗಳನ್ನು ಉತ್ಪಾದಿಸಲು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಏಣಿಯನ್ನಾಗಿ ಬಳಸಿದರು.

ಹಾಗಾಗಿ ಇಂದು ಭಾರತವು ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಜತೆಗೆ ಬೇರೆ ದೇಶಗಳಿಗೆ ರಫ್ತು ಮಾಡುವ ದಿಸೆಯಲ್ಲಿ ಬೆಳೆದು ನಿಂತಿದೆ. ಇದಕ್ಕೆ ಈಗ ಮತ್ತೊಂದು ನಿದರ್ಶನ ಸಿಕ್ಕಿದ್ದು, ಭಾರತದ ಉದಾರೀಕರಣ ನೀತಿಯಿಂದಾಗಿ ಅಮೆರಿಕ ಮಾರುಕಟ್ಟೆಗೆ ಪ್ರವೇಶ ದೊರಕಿದ ಹಿನ್ನೆಲೆ ಸುಮಾರು 10,745 ಕೋಟಿ ರೂ.ಗಳ ವಹಿವಾಟಿನೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ರಫ್ತು ದ್ವಿಗುಣವಾಗಿದೆ.

ಹೌದು, 2017-18ರಲ್ಲಿದ್ದ 4,682 ಕೋಟಿ ರೂಪಾಯಿಯಾಗಿದ್ದ ಭಾರತದ ರಕ್ಷಣಾ ರಫ್ತು ಪ್ರಮಾಣವು 2018-19ರಲ್ಲಿ 10,745 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಇದು ಭಾರತೀಯ ಕಂಪನಿಗಳು ಗುರುತಿಸಲಾದ ರಾಷ್ಟ್ರಗಳಿಗೆ ಕೆಲ ನಿರ್ದಿಷ್ಟ ಉಪಕರಣಗಳನ್ನು ರಫ್ತು ಮಾಡಲು ಅನುವು ಮಾಡಿಕೊಡಲಿದೆ.

ಹಳೆಯ ಶಸ್ತ್ರಾಸ್ತ್ರ ಪಾಲುದಾರರಾದ ಇಸ್ರೇಲ್ ಮತ್ತು ಯೂರೋಪ್ ಒಕ್ಕೂಟದ ನಂತರ, ಅಮೆರಿಕ, ಭಾರತದ ರಫ್ತುಗಳಿಗೆ ಬಹುದೊಡ್ಡ ಕೊಡುಗೆದಾರ ರಾಷ್ಟ್ರವಾಗಿದ್ದು, ಸುಮಾರು 5,000 ಕೋಟಿ ರೂ. ಮೌಲ್ಯದ ರಫ್ತುಗಳನ್ನು ಮಾಡಲಾಗಿದೆ. ಇತ್ತೀಚೆಗೆ ಉದಾರೀಕರಣ ನೀತಿಯಲ್ಲಿ ಮಾಡಲಾದ ಬದಲಾವಣೆಗಳ ಬಳಿಕ ದೇಶೀಯ ಕಂಪನಿಗಳಿಗೆ ಅಧಿಕೃತ ಅನುಮತಿ ದೊರಕಲು ಸುಲಭವಾಗಿರುವುದರಿಂದ ರಫ್ತಿನಲ್ಲಿ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಕ್ತ ಸಾಮಾನ್ಯ ರಫ್ತು ಪರವಾನಗಿಗೆ ಹೊಸ ಯೋಜನೆ ರೂಪಿಸುವುದು ಮುಂಬರುವ ವಾರಗಳಲ್ಲಿ ಪ್ರಕ್ರಿಯೆಗೊಳ್ಳಲಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಆಯ್ದ ಸಾಮಗ್ರಿಗಳಿಗೆ ಕೆಂಪು ಹಾಸಿನ ಸ್ವಾಗತದ ಅನುಮತಿ ದೊರಕಲಿದೆ ಎಂದು ನಿರೀಕ್ಷಿಸಲಾಗಿದೆ.

ಅದರಂತೆ ರಫ್ತು ಘಟಕಗಳನ್ನು ಮೀರಿ ಖಾಸಗಿ ಮತ್ತು ಸಾರ್ವಜನಿಕ ವಲಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಬೃಹತ್ ಪ್ರಮಾಣದ ಮೌಲ್ಯ ಸೇರ್ಪಡೆಗೆ ವೇದಿಕೆ ಒದಗಿಸಲು ಸಚಿವಾಲಯ ಚಿಂತನೆ ನಡೆಸಿದೆ. ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಬಹುತೇಕ ರಫ್ತುಗಳು ಸಣ್ಣ ಶಸ್ತ್ರಾಸ್ತ್ರಗಳಿಗೆ ಭಾಗಗಳಾಗಿದ್ದು, ರಪ್ತು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ ಎನ್ನಲಾಗಿದೆ.
ರಕ್ಷಣಾ ರಫ್ತುಗಳಿಗೆ ವೇದಿಕೆ ಒದಗಿಸುವುದು ಅತಿ ಮುಖ್ಯವಾಗಿದೆ. ಇದೇ ವೇಳೆ ನಾವು ಸ್ಪರ್ಧೆಯಲ್ಲಿರುವುದು ಸಹ ಮುಖ್ಯವಾಗಿದ್ದು ಇದರಿಂದ ಖರೀದಿದಾರರ ಹಣಕ್ಕೆ ಉತ್ತಮ ಮೌಲ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಚಿವಾಲಯದಲ್ಲಿನ ರಕ್ಷಣಾ ಉತ್ಪನ್ನಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜಯ್ ಜಾಜು ತಿಳಿಸಿದ್ದಾರೆ. ಭಾರತದಲ್ಲಿ ತಯಾರಿಕೆಯ ವೆಚ್ಚ ಕಡಿಮೆ ಇರುವುದು ರಫ್ತು ಬೆಳವಣಿಗೆಯನ್ನು ಉತ್ತೇಜಿಸಿದೆ. ಆದರೆ, ಈ ನಿಟ್ಟಿನಲ್ಲಿ ದೀರ್ಘಾವಧಿಯ ಬದ್ಧತೆಯ ಅಗತ್ಯವಿದೆ ಎಂದು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Be the first to comment