ನರೇಂದ್ರ ಮೋದಿ ಅವರ ಪ್ರಯತ್ನದಿಂದ ಜಾರ್ಖಂಡ್ ರೈಲು ನಿಲ್ದಾಣದಲ್ಲಿ ಮಹಿಳೆಯರ ಪಾತ್ರ ಹೇಗೆ ಹೆಚ್ಚಾಗಿದೆ ಗೊತ್ತಾ?

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ನಿಷೇಧ ಪ್ರಯತ್ನ, ಸ್ವತಂತ್ರವಾಗಿ ಹಜ್ ಯಾತ್ರೆ ಕೈಗೊಳ್ಳಲು ಅನುಕೂಲ, ವಾಯುಸೇನೆಗೆ ಮಹಿಳೆಯರು ಹೆಚ್ಚಾಗಿ ಸೇರುತ್ತಿರುವುದು ಸೇರಿ ದೇಶದಲ್ಲಿ ಹಲವು ಸುಧಾರಣೆಗಳಾಗಿವೆ.

ಈ ದಿಸೆಯಲ್ಲಿ ಕೇಂದ್ರ ಪ್ರಯತ್ನ ಹಾಗೂ ರೈಲ್ವೆ ಇಲಾಖೆ ಸಹಕಾರದಿಂದ ಜಾರ್ಖಂಡ್ ನ ಜಮ್ ಷೆಡ್ ಪುರದ ಆದಿತ್ಯಪುರ ರೈಲು ನಿಲ್ದಾಣದಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಶೀಘ್ರದಲ್ಲಿ ನೇಮಕವಾಗಲಿದ್ದು, ಆ ಮೂಲಕ ದೇಶದಲ್ಲೇ ಮಹಿಳೆಯರೇ ಸಂಪೂರ್ಣವಾಗಿರುವ ಎರಡನೇ ರೈಲು ನಿಲ್ದಾಣ ಎಂಬ ಖ್ಯಾತಿಗೆ ಆದಿತ್ಯಪುರ ರೈಲು ನಿಲ್ದಾಣ ಖ್ಯಾತಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಆಗ್ನೇ ರೈಲು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಮಾತನಾಡಿದ್ದು, ರೈಲು ನಿಲ್ದಾಣದಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಇರಲಿದ್ದು, ನಾವು ಈಗಾಗಲೇ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಈ ರೈಲು ನಿಲ್ದಾಣ ದೇಶದಲ್ಲೇ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಹೊಂದಿರುವ ಎರಡನೇ ರೈಲು ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಮಹಿಳಾ ಸಿಬ್ಬಂದಿಗೆ ರಕ್ಷಣೆ ಒದಗಿಸುವುದು ನಮ್ಮ ಉದ್ದೇಶವಾಗಿದ್ದು, ಈ ಕುರಿತು ರೈಲು ಭದ್ರತಾ ಪಡೆಯ ಜತೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ರೈಲು ನಿಲ್ದಾಣದಲ್ಲಿ ರಕ್ಷಣಾ ಸಿಬ್ಬಂದಿ ಸಹ ಮಹಿಳೆಯರೇ ಇರಲಿದ್ದಾರೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಹಿಜಿಲಿ ರೈಲು ನಿಲ್ದಾಣ ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನೇ ಹೊಂದಿದ ಮೊದಲ ರೈಲು ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಿದೆ.

Be the first to comment