ಕುಂಭಮೇಳಕ್ಕೆ ಅನುಕೂಲವಾಗಲು ಮಸೀದಿ ಕೆಡವಿ ಸೌಹಾರ್ದತೆ ಮೆರೆದ ಮುಸ್ಲಿಮರು!

ಲಖನೌ: ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ, ಹಿಂದೂಗಳ ಧರ್ಮವನ್ನು ಹೇರುತ್ತಿದ್ದಾರೆ, ಅಲ್ಪಸಂಖ್ಯಾತರನ್ನು ಹೀನಾಯವಾಗಿ ಕಾಣುತ್ತಿದ್ದಾರೆ, ಅವರ ಮೇಲೆ ಹಲ್ಲೆಗಳಾಗುತ್ತಿವೆ ಎಂದು ಬೊಬ್ಬೆ ಹಾಕುವ ಹುಸಿ ಹೋರಾಟಗಾರರು ಭಾರತದಲ್ಲಿ ತುಂಬ ಜನ ಇದ್ದಾರೆ. ಆದರೆ ಹಿಂದೂಗಳು ಮಾತ್ರ ಇದುವರೆಗೆ ಶಾಂತಿಯುತವಾಗಿ ವರ್ತಿಸುವ ಮೂಲಕ ನಮ್ಮದು ಜಾತ್ಯತೀತ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು, ಹಿಂದೂಗಳ ಶಾಂತ ಮನೋಭಾವ ಮೆಚ್ಚಿ, ಸೌಹಾರ್ದತೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಕುಂಭಮೇಳ ಅದ್ಧೂರಿಯಾಗಿ ನಡೆಯುವ ದಿಸೆಯಲ್ಲಿ ಹಲವು ಮುಸ್ಲಿಮರು ರಸ್ತೆ ಬದಿ ಇದ್ದ ವಿವಿಧ ಮಸೀದಿಗಳನ್ನು ನೆಲಸಮ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಈ ಬಾರಿ ನಡೆಯುವ ಕುಂಭಮೇಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿ ಬಿಂಬಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಈ ದಿಸೆಯಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ರಸ್ತೆ ವಿಸ್ತರಣೆಗೆ ಸಹ ಸರ್ಕಾರ ಮುಂದಾಗಿದೆ, ಹಾಗಂತ ರಸ್ತೆ ಬದಿಯ ಮಸೀದಿ ಕೆಡವಬೇಕು ಎಂದು ಯೋಗಿ ಆದೇಶಿಸಿರಲಿಲ್ಲ.

ಆದರೆ ಕುಂಭಮೇಳಕ್ಕೆ ಸ್ವಯಂಪ್ರೇರಿತರಾಗಿ ಬೆಂಬಲ ಘೋಷಿಸಿರುವ ಮುಸ್ಲಿಮರು ರಸ್ತೆ ಬದಿಯ ಮಸೀದಿಗಳನ್ನು ನೆಲಸಮ ಮಾಡಲು ಮುಂದಾಗಿದ್ದಾರೆ. ನಾವು ಹಿಂದೂ ಧರ್ಮದ ಆಚರಣೆ, ನಂಬಿಕೆಗೆ ಬೆಲೆ ನೀಡುತ್ತೇವೆ. ಕುಂಭಮೇಳ ಯಶಸ್ವಿಯಾಗಿ ನಡೆಯುವ ದಿಸೆಯಲ್ಲಿ ರಸ್ತೆ ಬದಿಯ ಮಸೀದಿ ನೆಲಸಮ ಮಾಡುವ ಮೂಲಕ ಸಹಕಾರ ನೀಡುತ್ತಿದ್ದೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಲಕ್ಷಾಂತರ ಹಿಂದೂಗಳು ಸೇರುವ ಕುಂಭಮೇಳಕ್ಕೆ ಮುಸ್ಲಿಮರು ಸಹಕಾರ ನೀಡಿ ಸೌಹಾರ್ದತೆಗೆ ಮಾದರಿಯಾಗಿದ್ದಾರೆ., ಆ ಮೂಲಕ ಭಾರತ ಜಾತ್ಯತೀತ ರಾಷ್ಟ್ರ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಧಾರ್ಮಿಕ ಅಸಹಿಷ್ಣುತೆ ಇದೆ ಎನ್ನುವವರು ಮೊದಲು ಇದನ್ನು ಅರ್ಥಮಾಡಿಕೊಳ್ಳಲಿ.

Be the first to comment